ಕೇಟೋ (ಕಿರಿಯ), ಮಾರ್ಕಸ್ ಪೋರ್ಸಿಯಸ್

ಕ್ರಿ.ಪೂ. 95-ಕ್ರಿ.ಪೂ.46. ರೋಮಿನ ರಾಜಕಾರಣಿ ಮತ್ತು ತತ್ತ್ವಜ್ಞಾನಿ. ಅಲ್ಲಿಯ ಸೆನೆಟಿನಲ್ಲಿದ್ದ ಪ್ರಬಲ ವ್ಯಕ್ತಿಗಳ, ಅವರಲ್ಲೂ ಮುಖ್ಯವಾಗಿ ಸೀಸರನ, ವಿರುದ್ಧ ಪ್ರಜಾತಂತ್ರದ ರಕ್ಷಣೆಗಾಗಿ ಹೋರಾಡಿದ ಬಣದ ನಾಯಕ. ದಕ್ಷ ಆಡಳಿತಗಾರ. ಏಷ್ಯದ ಪ್ರಾಂತ್ಯವೊಂದರಲ್ಲಿ ಅಧಿಕಾರ ಪಡೆದು, ಲಂಚಗುಳಿತನದ ವಿರುದ್ಧ ಹೋರಾಡಿದ. ಪಾಂಪೆ, ಸೀಸರ್ ಮತ್ತು ಕ್ರಾಸಸರಂಥ ಪ್ರಬಲರ ವಿರುದ್ಧ ಹೋರಾಡುತ್ತಿದ್ದುದರ ಫಲವಾಗಿ ಆ ಮೂವರೂ ಒಂದಾಗಿ ತಮ್ಮ ತ್ರಿಪ್ರಭುತ್ವವನ್ನು (ಟ್ರಯಂವಿರೇಟ್) ಸ್ಥಾಪಿಸಿದರು. ಇವನ ಉಪಟಳವನ್ನು ತಪ್ಪಿಸಿಕೊಳ್ಳಲು ಸೀಸರ್ ಇವನನ್ನು ಸೈಪ್ರಸ್ ದಂಡ ಯಾತ್ರೆಗೆಂದು ಹೊರಕ್ಕೆ ಕಳಿಸಿದರೂ (ಕ್ರಿ.ಪೂ.58) ಈತ ಕ್ರಿ.ಪೂ. 56ರಲ್ಲಿ ಹಿಂದಿರುಗಿ ಹೋರಾಟ ಮುಂದುವರಿಸಿದ. ಕ್ರಿ.ಪೂ.54ರಲ್ಲಿ ಈತ ರೋಮಿನ ಪ್ರೇಟರ್ ಆದಾಗ ಲಂಚದ ವಿರುದ್ಧ ಕ್ರಮ ಕೈಕೊಂಡ. ಕ್ರಿ.ಪೂ.51ರಲ್ಲಿ ಕಾನ್ಸಲ್ ಪದವಿಗಾಗಿ ಪ್ರಯತ್ನಿಸಿದ. ಆದರೆ ಅದು ದೊರಕಲಿಲ್ಲ. ಕ್ರಿ.ಪೂ.49ರಲ್ಲಿ ಸಂಭವಿಸಿದ ಅಂತರ್ಯುದ್ಧದಿಂದ ಈತ ಬೇಸರಹೊಂದಿ ಸಾರ್ವಜನಿಕ ಕ್ಷೇತ್ರದಿಂದ ನಿವೃತ್ತಿ ಹೊಂದಬಯಸಿದ. ಆದರೆ ಅನಂತರ ಸಿಸಿಲಿಯ ರಕ್ಷಣೆಯಲ್ಲಿ ಪಾಂಪೆಗೆ ನೆರವು ನೀಡಿದುದಲ್ಲದೆ ಸೀಸರನ ವಿರುದ್ಧ ಹೋರಾಟದಲ್ಲೂ ಸಹಾಯ ಮಾಡಿದ. ಕ್ರಿ.ಪೂ.46ರಲ್ಲಿ ಥಾಪ್ಸಸ್ ಕದನದಲ್ಲಿ ಈತ ಸೋತ. ಹಿಂಬಾಲಕರನ್ನು ಸುರಕ್ಷಿತವಾಗಿ ತನ್ನ ದೇಶಕ್ಕೆ ಕಳುಹಿಸಿ ತಾನು ಆತ್ಮಹತ್ಯೆ ಮಾಡಿಕೊಂಡ. ಜೀವನದ ಉದ್ದಕ್ಕೂ ತನಗೆ ಸರಿತೋರಿದ ಧ್ಯೇಯಕ್ಕಾಗಿ ಹೋರಾಡಿದ ಕೇಟೋನ ಮರಣಾನಂತರ ಇವನ ಸಮಕಾಲೀನರು ಇವನನ್ನು ತಮ್ಮ ಪವಿತ್ರನಾಯಕನೆಂದು ಪರಿಗಣಿಸಿದ್ದರು.                		 			
 
(ಎಚ್.ಆರ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ